Karnataka Budget 2024 : ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ₹1,000 ಕೋಟಿ ನಿರೀಕ್ಷೆ!

Authored by ಸಾಗರ್‌ ಕನ್ನೆಮನೆ | The Economic Times Kannada | Updated: 16 Feb 2024, 9:54 am

Namma Metro Expectations : ಶುಕ್ರವಾರ ಕರ್ನಾಟಕ ಬಜೆಟ್‌ ಮಂಡನೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಯಾವೆಲ್ಲಾ ಕ್ಷೇತ್ರಗಳಿಗೆ ಅನುದಾನ ನೀಡಲಿದ್ದಾರೆ ಎಂಬ ನಿರೀಕ್ಷೆಗಳು ಹೆಚ್ಚಿವೆ. ಹೀಗಿರುವಾಗ ಬೆಂಗಳೂರಿಗೆ ಅದ್ರಲ್ಲೂ ನಮ್ಮ ಮೆಟ್ರೋಗೆ ಬಜೆಟ್‌ನಿಂದ ಏನೆಲ್ಲಾ ಕೊಡುಗೆ ಸಿಗಬಹುದು ಎಂಬುದನ್ನು ಇಲ್ಲಿ ತಿಳಿಯಬಹುದು.

ಹೈಲೈಟ್ಸ್‌:

  • ನಮ್ಮ ಮೆಟ್ರೋದ 3ನೇ ಹಂತದ ವಿಸ್ತರಣೆಗಾಗಿ ಸಾವಿರ ಕೋಟಿ ರೂ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್‌
  • ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ/ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾರ್ಗ ನಿರ್ಮಾಣ
  • ಕಾಮಗಾರಿ ಆರಂಭಕ್ಕೆ ಸಿಗಬೇಕಿದೆ ಕೇಂದ್ರದ ಅನುಮೋದನೆ, ಮಾರ್ಚ್ ಒಳಗಾಗಿ ಸಿಗುವ ಸಾಧ್ಯತೆ
Namma Metro
ನಮ್ಮ ಮೆಟ್ರೋ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 15ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ಹಲವು ಕ್ಷೇತ್ರಗಳ ನಿರೀಕ್ಷೆಗಳು ಗರಿಗೆದರಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) 'ನಮ್ಮ ಮೆಟ್ರೋ' ಮೂರನೇ ಹಂತದ ವಿಸ್ತರಣೆಗಾಗಿ ರಾಜ್ಯ ಸರಕಾರದ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂ. ಅನುದಾನ ನಿರೀಕ್ಷಿಸಿದೆ.

ಸುಮಾರು 44.65 ಕಿ.ಮೀ. ಉದ್ದದ ಮಾರ್ಗವನ್ನು ಮೆಟ್ರೋ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, ಎರಡು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಹೊಂದಿದೆ. ಒಂದು ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆ (12.5 ಕಿ.ಮೀ.) ಮತ್ತು ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ (32.15 ಕಿಮೀ) ಮತ್ತೊಂದು ಕಾರಿಡಾರ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಒಟ್ಟು 40 ನಿಲ್ದಾಣಗಳನ್ನು ಹೊಂದಿರುತ್ತದೆ.

Karnataka Budget 2024: ಇಂದು (ಫೆ.16) ಬೆಳಗ್ಗೆ 10:15ಕ್ಕೆ ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್‌ ಮಂಡನೆ

ರಾಜ್ಯ ಒಪ್ಪಿಗೆ ನೀಡಿರಲಿಲ್ಲ

ಎರಡೂ ಮಾರ್ಗಗಳನ್ನು ಒಳಗೊಂಡಿರುವ 44 ಕಿ.ಮೀ. ಯೋಜನೆ ಇದಾಗಿದ್ದು, 2022ರ ನವೆಂಬರ್‌ನಲ್ಲಿ ಹಂತ-3ರ ವಿವರವಾದ ಯೋಜನಾ ವರದಿಗೆ (ಡಿಪಿಆರ್‌) ಹಸಿರು ನಿಶಾನೆ ತೋರಿದ್ದರೂ, ರಾಜ್ಯ ಸರಕಾರ ಪೂರ್ವ-ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ತನ್ನ ಒಪ್ಪಿಗೆ ನೀಡಿರಲಿಲ್ಲ.


ಯೋಜನೆಗೆ ಕೇಂದ್ರದ ಅನುಮೋದನೆ ಅಗತ್ಯವಿರುವುದರಿಂದ ಅದಕ್ಕೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯೋಜನೆಯು ಎಲ್ಲ ಶಾಸನಬದ್ಧ ಅಡೆತಡೆಗಳನ್ನು ತೆರವುಗೊಳಿಸುವವರೆಗೆ ಪ್ರಾಥಮಿಕ ಕೆಲಸ ಪ್ರಾರಂಭಿಸಲು ನಿರ್ದಿಷ್ಟ ಅನುಮೋದನೆ ಕೋರಿ ಬಿಎಂಆರ್‌ಸಿಎಲ್‌ ಮತ್ತೊಮ್ಮೆ ಕೇಂದ್ರಕ್ಕೆ ಪತ್ರ ಬರೆದಿದೆ. ಮಾರ್ಚ್ ವೇಳೆಗೆ ಕೇಂದ್ರವು ಡಿಪಿಆರ್‌ ಅನುಮೋದಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.


ಈ ನಡುವೆ, ಹಣಕಾಸು ಇಲಾಖೆಯು ಕೇಂದ್ರದ ಒಪ್ಪಿಗೆಗೆ ಮುಂಚಿತವಾಗಿ ನಿರ್ಮಾಣ ಪೂರ್ವ ಚಟುವಟಿಕೆಗಳಿಗೆ ಅನುಮೋದನೆ ನೀಡಿದ ಪೂರ್ವನಿದರ್ಶನಗಳಿವೆಯೇ ಎಂದು ಪತ್ರ ಬರೆದಿದೆ. ಪ್ರತಿಕ್ರಿಯೆಯಾಗಿ, ನಮ್ಮ ಮೆಟ್ರೋ ಹಂತ 2 ಎ (ಸಿಲ್‌್ಕ ಬೋರ್ಡ್‌-ಕೆಆರ್‌ಪುರ) ಮತ್ತು ಹಂತ 2ಬಿ (ಕೆಆರ್‌ಪುರ-ವಿಮಾನ ನಿಲ್ದಾಣ) ಉದಾಹರಣೆಗಳನ್ನು ಉಲ್ಲೇಖಿಸಿದೆ. ಅಂತಹ ಅನುಮೋದನೆಗಳನ್ನು ಹಿಂದೆ ನೀಡಲಾಗಿತ್ತು.

Karnataka Budget 2024: ರಾಜ್ಯ ಬಜೆಟ್‌ನಲ್ಲಿ ಹೊಸ ಜಿಲ್ಲೆ ಘೋಷಣೆ? ತುಮಕೂರು, ಬೆಳಗಾವಿ ಜಿಲ್ಲೆಗಳ ವಿಭನೆಯ ಸುಳಿವು

1003.47 ಕೋಟಿ ರೂಪಾಯಿಗೆ ಮನವಿ

ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸಲು ಕೇಂದ್ರ ಸರಕಾರ ಸಾಮಾನ್ಯವಾಗಿ 12-18 ತಿಂಗಳು ತೆಗೆದುಕೊಳ್ಳುತ್ತದೆ. ಆದ್ದರಿಂದ ಇದು ಅಸಾಧ್ಯವೇನಲ್ಲ. ಕಾಮಗಾರಿಗೆ ಸಿದ್ಧತೆ ಕೈಗೊಳ್ಳಲು, ಮುಂಬರುವ ಬಜೆಟ್‌ನಲ್ಲಿ 1,003.47 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಭೂಸ್ವಾಧೀನದ ಕುರಿತು ಮಾತನಾಡಿದ ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂ.ಎಸ್‌.ಚನ್ನಪ್ಪಗೌಡ, ''ಜೆಪಿ ನಗರ 4ನೇ ಹಂತ ಮತ್ತು ಮೈಸೂರು ರಸ್ತೆ ನಡುವೆ ನಿಲ್ದಾಣಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲು ಅಗತ್ಯವಿರುವ ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು ಮಾಲೀಕರಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ,'' ಎಂದು ತಿಳಿಸಿದ್ದಾರೆ.

2028ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ನಿಗಮ ಹಾಕಿಕೊಂಡಿದೆ. ಯೋಜನೆ ವೆಚ್ಚ 16,328 ಕೋಟಿ ರೂ.ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಡಿಪೋ ಸೇರಿದಂತೆ ಯೋಜನೆಗೆ ಒಟ್ಟು 110 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದರಲ್ಲಿಶೇ.85ರಷ್ಟು ಸರಕಾರಿ ಜಮೀನಿದ್ದು, ಉಳಿದ ಶೇ.15ರಷ್ಟು ಖಾಸಗಿ ಜಮೀನು ಪಡೆಯಬೇಕಾಗಿದೆ.


ಸಾಗರ್‌ ಕನ್ನೆಮನೆ ಅವರ ಬಗ್ಗೆ
ಸಾಗರ್‌ ಕನ್ನೆಮನೆ Senior Digital Content Producer
ದಿ ಎಕನಾಮಿಕ್ ಟೈಮ್ಸ್‌ ಕನ್ನಡ'ದಲ್ಲಿ ಹಿರಿಯ ಡಿಜಿಟಲ್ ಪತ್ರಕರ್ತರಾಗಿ 2023 ಜನವರಿಯಿಂದ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 11 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಮುಖವಾಗಿ ಆರ್ಥಿಕತೆ, ಹಣಕಾಸು ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಇವರ ಆಸಕ್ತಿಯ ವಿಷಯಗಳು. ಬೆಟ್ಟ, ಗುಡ್ಡಗಳ ಚಾರಣ, ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ಮೆಚ್ಚಿನ ಹವ್ಯಾಸಗಳು.Read More