ಸೆಬಿಗೆ ₹25 ಲಕ್ಷ ದಂಡ ಪಾವತಿಸಿ 'ಇನ್‌ಸೈಡರ್ ಟ್ರೇಡಿಂಗ್' ಆರೋಪ ಇತ್ಯರ್ಥ ಮಾಡಿಕೊಂಡ ಇನ್ಫೋಸಿಸ್‌

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 27 Jun 2024, 5:25 pm

Infosys settles insider trading: ಭಾರತದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಕಂಪನಿ ಇನ್ಫೋಸಿಸ್‌ ವಿರುದ್ಧ 'ಇನ್‌ಸೈಡರ್ ಟ್ರೇಡಿಂಗ್' ನಿಯಮಗಳ ಉಲ್ಲಂಘನೆ ಆರೋಪ ಎದುರಾಗಿದೆ. ಆದರೆ, ಕಂಪನಿಯು ಸೆಬಿಗೆ 25 ಲಕ್ಷ ರೂ. ದಂಡ ಪಾವತಿಸುವ ಮೂಲಕ ಈ ಆರೋಪವನ್ನು ಇತ್ಯರ್ಥಪಡಿಸಿಕೊಂಡಿದೆ.

ಹೊಸ ದಿಲ್ಲಿ: ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಹಾಗೂ ಅದರ ಸಿಇಒ ಸಲಿಲ್ ಪರೇಖ್ ವಿರುದ್ಧ ಷೇರು ಮಾರುಕಟ್ಟೆಯಲ್ಲಿ ಇನ್‌ಸೈಡರ್ ಟ್ರೇಡಿಂಗ್ (ಅಕ್ರಮ ಆಂತರಿಕ ವ್ಯಾಪಾರ) ನಡೆಸಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್‌ ಎಂಡಿ ಮತ್ತು ಸಿಇಒ ಸಲೀಲ್‌ ಪಾರೇಖ್‌ ಅವರು ಸೆಬಿಗೆ 25 ಲಕ್ಷ ರೂಪಾಯಿ ಪಾವತಿಸಲು ಒಪ್ಪಿದ್ದು, ಆರೋಪವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
Salil Parekh
ಜುಲೈ 2020ರಲ್ಲಿ ಅಮೆರಿಕ ಮೂಲದ ಜಾಗತಿಕ ಸ್ವತ್ತು ನಿರ್ವಹಣಾ ಸಂಸ್ಥೆ ವ್ಯಾನ್‌ ಗಾರ್ಡ್‌ ಜೊತೆ ಇನ್ಫೋಸಿಸ್ ಒಪ್ಪಂದ ಮಾಡಿಕೊಂಡಿತ್ತು. ಈ ಸಹಭಾಗಿತ್ವ ಒಪ್ಪಂದದ ಕುರಿತಾಗಿ ಅಧಿಕೃತ ಮಾಹಿತಿ ಹೊರ ಬೀಳುವ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಮಾಹಿತಿ ಸೋರಿಕೆಯಾದ ಕಾರಣ ಅಕ್ರಮವಾಗಿ ಆಂತರಿಕ ವ್ಯಾಪಾರ ನಡೆಸಿದ ಆರೋಪ ಇನ್ಫೋಸಿಸ್ ಹಾಗೂ ಅದರ ಸಿಇಒ ಸಲೀಲ್‌ ಪರೇಖ್ ವಿರುದ್ಧ ಕೇಳಿ ಬಂದಿತ್ತು.

ವ್ಯಾನ್ ಗಾರ್ಡ್‌ ಹಾಗೂ ಇನ್ಫೋಸಿಸ್ ನಡುವಣ ಒಪ್ಪಂದದ ಪ್ರಕಾರ ವ್ಯಾನ್‌ ಗಾರ್ಡ್‌ ಸಂಸ್ಥೆಗೆ ಇನ್ಫೋಸಿಸ್ ಕ್ಲೌಡ್ ಆಧಾರಿತ ದಾಖಲೆ ಸಂಗ್ರಹ ವೇದಿಕೆ ನಿರ್ಮಿಸಿಕೊಡುವ ಯೋಜನೆ ಕುರಿತಾದ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಏನಿದು ಇನ್‌ಸೈಡರ್ ಟ್ರೇಡಿಂಗ್?

ಯಾವುದೇ ಎರಡು ಸಂಸ್ಥೆಗಳ ನಡುವೆ ದ್ವಿಪಕ್ಷೀಯ ಸಹಭಾಗಿತ್ವ ಒಪ್ಪಂದ ಏರ್ಪಡುವ ಮುನ್ನ ಈ ಕುರಿತಾದ ಮಾಹಿತಿಯನ್ನು ಪ್ರಕಟಿಸಬಾರದು. ಏಕೆಂದರೆ ಇದು ಷೇರು ಮಾರುಕಟ್ಟೆಯಲ್ಲಿ ಪರಿಣಾಮ ಬೀರಬಹುದಾದ ಸಾಧ್ಯತೆ ಇರುತ್ತದೆ. ಇದನ್ನು ‘ಅಪ್ರಕಟಿತ ದರ ಸೂಕ್ಷ್ಮ ಮಾಹಿತಿ’ (ಯುಪಿಎಸ್‌ಐ) ಎಂದು ಕರೆಯಲಾಗುತ್ತದೆ. ಆದರೆ, ಇನ್ಫೋಸಿಸ್ ಸಂಸ್ಥೆಯು ಸೆಬಿಯ ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಆರೋಪ ಕೇಳಿ ಬಂದಿತ್ತು.

ಯಾವುದೇ ರೀತಿಯ ಅತ್ಯಂತ ಪ್ರಮುಖ ಘೋಷಣೆಗಳು ಹಾಗೂ ಒಪ್ಪಂದಗಳನ್ನು ಯುಪಿಎಸ್‌ಐ ಎಂದು ಪರಿಗಣಿಸಲಾಗುತ್ತದೆ. ಸೆಬಿ ರೂಪಿಸಿರುವ ಆಂತರಿಕ ಅಕ್ರಮ ಮಾರಾಟ ತಡೆ ನಿಯಮಗಳ ಅನ್ವಯ ಯಾವುದೇ ಸಂಸ್ಥೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಮಾಹಿತಿ ಅಥವಾ ಸುಳ್ಳು ಮಾಹಿತಿ ಹರಡಿ ಷೇರು ದರಗಳ ಕೃತಕ ಏರಿಳಿಕೆಗೆ ಯತ್ನಿಸಿದರೆ ಇದನ್ನು ‘ಆಂತರಿಕ ಅಕ್ರಮ ವ್ಯಾಪಾರ’ ಎಂದು ಪರಿಗಣಿಸಲಾಗುತ್ತದೆ.

ಇನ್ಫೋಸಿಸ್‌ ವಿರುದ್ಧ ಆಂತರಿಕ ಅಕ್ರಮ ವ್ಯಾಪಾರದ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಆಗಸ್ಟ್‌ 2023ರಲ್ಲಿ ಸೆಬಿಯಿಂದ ಇನ್ಫೋಸಿಸ್‌ಗೆ ನೋಟಿಸ್ ಹೋಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತಾಗಿ ಇನ್ಫೋಸಿಸ್ ಸಂಸ್ಥೆ ಸರ್ವ ಸಮ್ಮತ ದಂಡ ಪಾವತಿ ಮಾಡಿದೆ. ಈ ರೀತಿಯ ಪ್ರಕರಣಗಳ ಅಡಿ ಸಂಸ್ಥೆ ತನ್ನ ವಿರುದ್ಧದ ಅಕ್ರಮ ಆರೋಪಗಳನ್ನ ಒಪ್ಪಿಕೊಳ್ಳದೆ ಹಾಗೂ ನಿರಾಕರಣೆಯನ್ನೂ ಮಾಡದೆ ಕೇವಲ ದಂಡವನ್ನು ಮಾತ್ರ ಪಾವತಿ ಮಾಡಿ ನಿಷೇಧ ಶಿಕ್ಷೆಯಿಂದ ಪಾರಾಗಬಹುದಾಗಿದೆ. ಈ ಸೌಲಭ್ಯವನ್ನು ಇನ್ಫೋಸಿಸ್ ಬಳಕೆ ಮಾಡಿಕೊಂಡಿದೆ.

ಈ ಕುರಿತಾಗಿ ಸೆಬಿಯ ಅತ್ಯುನ್ನತ ಸಮಿತಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ವಿವರಿಸಿರುವ ಇನ್ಫೋಸಿಸ್, ತಮ್ಮ ಸಂಸ್ಥೆಯು ‘ಅಪ್ರಕಟಿತ ದರ ಸೂಕ್ಷ್ಮ ಮಾಹಿತಿ’ಯನ್ನು ಗುರ್ತಿಸಿ ಅದನ್ನು ಆಡಳಿತ ಮಂಡಳಿ ಮುಂದೆ ಇಟ್ಟು ಸಮ್ಮತಿ ಪಡೆಯುತ್ತದೆ. ಬಳಿಕ ಅದನ್ನು ಸಮ್ಮತಿಸಿದ ನೀತಿಯನ್ನಾಗಿ ರೂಪಿಸಲಾಗುತ್ತದೆ ಎಂದು ವಿವರಿಸಿದೆ.
ಇನ್ಫೋಸಿಸ್ ಸಂಸ್ಥೆಯ ಒಟ್ಟು ವಾರ್ಷಿಕ ಆದಾಯ ಹಾಗೂ ಸರಾಸರಿ ವಾರ್ಷಿಕ ಆದಾಯ ಹೋಲಿಕೆ ಕುರಿತಾದ ಮಾಹಿತಿಯನ್ನು ಮಂಡಳಿ ಮುಂದೆ ಇಡಲಾಗಿತ್ತು ಎಂದು ಸಂಸ್ಥೆ ತನ್ನ ಮನವಿಯಲ್ಲಿ ವಿವರಿಸಿದೆ.


Share Market ಮತ್ತು ಷೇರು ಮಾರುಕಟ್ಟೆ ಕುರಿತು ಇತ್ತೀಚಿನ ಮತ್ತು ಬ್ರೇಕಿಂಗ್ ಸುದ್ದಿಗಳನ್ನು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ಓದಿ
ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More