Please enable javascript.wheat prices hike: ಗೋಧಿ ಬೆಲೆ ಏರಿಕೆ ನಿಯಂತ್ರಿಸಲು ದಾಸ್ತಾನು ಮೇಲೆ ಮಿತಿ ಹೇರಿದ ಕೇಂದ್ರ ಸರಕಾರ - centre imposes limit on wheat stocks to control prices | The Economic Times Kannada

ಗೋಧಿ ಬೆಲೆ ಏರಿಕೆ ನಿಯಂತ್ರಿಸಲು ದಾಸ್ತಾನು ಮೇಲೆ ಮಿತಿ ಹೇರಿದ ಕೇಂದ್ರ ಸರಕಾರ

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 25 Jun 2024, 10:58 pm

ಗೋಧಿ ಬೆಲೆ ಏರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕೇಂದ್ರ ಸರಕಾರ, ದಾಸ್ತಾನು ಮಾಡುವುದಕ್ಕೆ ಮಿತಿಗಳನ್ನು ಹೇರಿದೆ. ಈ ಸಂಬಂಧ ಚಿಲ್ಲರೆ, ಸಗಟು ವ್ಯಾಪಾರಿಗಳು, ಸಂಸ್ಕರಣೆ ಮಾಡುವವರಿಗೆ ನಿರ್ದೇಶನ ನೀಡಿದ್ದು, ಈಗಾಗಲೇ ಹೆಚ್ಚುವರಿ ದಾಸ್ತಾನು ಇರುವವರು ಅದನ್ನು ವಿಲೇವಾರಿ ಮಾಡಲು ಹೇಳಿದೆ. ಈಗ ಸೂಚಿತವಾಗಿರುವ ಮಿತಿಯನ್ನು ಪಾಲನೆ ಮಾಡಲು ವ್ಯಾಪಾರಿಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

 
Wheat Price
ಹೊಸದಿಲ್ಲಿ: ಗೋಧಿ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರಕಾರ ದಾಸ್ತಾನು ಮಾಡುವುದಕ್ಕೆ ಮಿತಿಗಳನ್ನು ಹೇರಿದೆ. ಚಿಲ್ಲರೆ ಮಾರಾಟ ಮಳಿಗೆಗಳು 10 ಟನ್‌ ಗೋಧಿಯನ್ನು ಮಾತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಸಗಟು ವ್ಯಾಪಾರಿಗಳು ಮತ್ತು ಹತ್ತು ಹಲವು ಮಾರಾಟ ಮಳಿಗೆಗಳನ್ನು ಹೊಂದಿರುವವರು ಮೂರು ಸಾವಿರ ಟನ್‌ ಮಾತ್ರ ದಾಸ್ತಾನು ಮಾಡಬೇಕು.
ಗೋಧಿಯನ್ನು ವಿವಿಧ ರೀತಿಯಲ್ಲಿ ಸಂಸ್ಕರಣೆ ಮಾಡುವವರ ಸಂಸ್ಕರಣೆ ಘಟಕಗಳ ಸ್ಥಾಪಿತ ಸಾಮರ್ಥ್ಯ (ಎಂಐಸಿ)ದ ಶೇ. 70ರಷ್ಟು ಮಾತ್ರ ದಾಸ್ತಾನಿಗೆ ಅವಕಾಶವಿದೆ ಎಂದು ನಿರ್ದೇಶಿಸಿದೆ. ಈಗಾಗಲೇ ಹೆಚ್ಚುವರಿ ದಾಸ್ತಾನು ಇರುವವರು ಅದನ್ನು ವಿಲೇವಾರಿ ಮಾಡಿ, ಈಗ ಸೂಚಿತವಾಗಿರುವ ಮಿತಿಯನ್ನು ಪಾಲನೆ ಮಾಡಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಈ ನಿರ್ಬಂಧವು ಮಾರ್ಚ್ 31, 2025ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿರುತ್ತವೆ. ಕಳೆದ ವಾರ ಗೃಹ ಖಾತೆ ಹಾಗೂ ಮತ್ತು ಸಹಕಾರ ಖಾತೆ ಸಚಿವ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೋಧಿ ಬೆಲೆ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಸಂಗ್ರಹ ಮಿತಿ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಪ್ರತಿ ಕೆ.ಜಿ.ಗೆ 2 ರೂ.ವರೆಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಜೂನ್‌ 20ರ ಹೊತ್ತಿಗೆ ಗೋಧಿ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ 30.99 ರೂ.ಗಳಷ್ಟಿತ್ತು. ಕಳೆದ ವರ್ಷ 28.95 ರೂ. ಇತ್ತು. ಗೋಧಿ ಹಿಟ್ಟಿನ ಬೆಲೆ ಕಳೆದ ವರ್ಷ ಕೆ.ಜಿ.ಗೆ 34.29 ದರವಿತ್ತು. ಈಗ ಇದು 36.13 ರೂ.ಗೆ ಏರಿದೆ. ಪಡಿತರದಲ್ಲಿ ಗೋಧಿ ವಿತರಿಸಲು ಬೇಕಾದ ಸಂಗ್ರಹ ನಮ್ಮಲ್ಲಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಗೋಧಿ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ತಿಳಿಸಿದೆ.
"ದೇಶದಲ್ಲಿ ಗೋಧಿಯ ಕೊರತೆಯನ್ನು ನಿವಾರಿಸಲು ನಾವು ಬಯಸುತ್ತೇವೆ. ಸದ್ಯಕ್ಕೆ ಗೋಧಿ ರಫ್ತಿಗೆ ಯಾವುದೇ ನಿಷೇಧವಿಲ್ಲ. ಗೋಧಿ ಬೆಲೆ ಏರಿಕೆಯಾಗದೆ ಸ್ಥಿರವಾಗಿರಬೇಕು ಎಂಬ ಅಪೇಕ್ಷೆ ನಮ್ಮದು. ದಾಸ್ತಾನು ಇಟ್ಟುಕೊಂಡವರು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸಬಹುದು. ಈ ಸಾಧ್ಯತೆಯನ್ನು ಮಾಧ್ಯಮಗಳು ತೋರಿದ ಹಿನ್ನೆಲೆಯಲ್ಲಿ ದಾಸ್ತಾನಿಗೆ ಮಿತಿ ವಿಧಿಸಲಾಗಿದೆ," ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ಹೇಳಿದ್ದಾರೆ.


ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More