Please enable javascript.epfo adds 18.92 lakh members in april: ಏಪ್ರಿಲ್‌ನಲ್ಲಿ ಇಪಿಎಫ್‌ಒಗೆ ದಾಖಲೆಯ 18.9 ಲಕ್ಷ ಉದ್ಯೋಗಿಗಳು ಸೇರ್ಪಡೆ, ಕಳೆದ 6 ವರ್ಷಗಳಲ್ಲೇ ಗರಿಷ್ಠ! - epfo records highest addition of 18.92 lakh net members ​​in april 2024 maximum in last 6 years | The Economic Times Kannada

ಏಪ್ರಿಲ್‌ನಲ್ಲಿ ಇಪಿಎಫ್‌ಒಗೆ ದಾಖಲೆಯ 18.9 ಲಕ್ಷ ಉದ್ಯೋಗಿಗಳು ಸೇರ್ಪಡೆ, ಕಳೆದ 6 ವರ್ಷಗಳಲ್ಲೇ ಗರಿಷ್ಠ!

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 23 Jun 2024, 3:55 pm

EPFO adds 18.92 lakh members in April: 2024ರ ಏಪ್ರಿಲ್ ತಿಂಗಳಲ್ಲಿ ದಾಖಲೆಯ 18.9 ಲಕ್ಷ ಜನರು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಇಪಿಎಫ್‌ಒ ಅಡಿಯಲ್ಲಿ ಸಂಘಟಿತ ವಲಯದ ಉದ್ಯೋಗ ಸೃಷ್ಟಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 10ರಷ್ಟು ಏರಿಕೆ ಕಂಡಿದೆ. ಇಪಿಎಫ್‌ಒ ಸೇರುತ್ತಿರುವ ಉದ್ಯೋಗಿಗಳ ಸಂಖ್ಯೆ ತಿಂಗಳಿಂದ ತಿಂಗಳಿಗೆ ಏರಿಕೆ ಕಾಣುತ್ತಲೇ ಇದ್ದು, ಏಪ್ರಿಲ್‌ನಲ್ಲಿ 8.87 ಲಕ್ಷ ಹೊಸ ಸದಸ್ಯರು ಭವಿಷ್ಯ ನಿಧಿ ಸಂಘಟನೆ ಸೇರಿದ್ದಾರೆ.

 
EPFO New
ಏಪ್ರಿಲ್ 2024ರಲ್ಲಿ ದಾಖಲೆಯ 18.9 ಲಕ್ಷ ಜನರು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ)ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಇಪಿಎಫ್‌ಒ ಅಡಿಯಲ್ಲಿ ಸಂಘಟಿತ ವಲಯದ ಉದ್ಯೋಗ ಸೃಷ್ಟಿಯಲ್ಲಿ ಶೇ. 10ರಷ್ಟು ಏರಿಕೆ ದಾಖಲಾಗಿದೆ.
2023ರ ಏಪ್ರಿಲ್‌ನಲ್ಲಿ 17.2 ಲಕ್ಷ ಉದ್ಯೋಗಿಗಳು ಇಪಿಎಫ್‌ಒ ಸೇರಿದ್ದರು. ಇದು ಏಪ್ರಿಲ್ 2018ರಲ್ಲಿ ಮೊದಲ ವೇತನದಾರರ ಡೇಟಾವನ್ನು ಪ್ರಕಟಿಸಿದಾಗಿನಿಂದ ಅಂದರೆ ಕಳೆದ 72 ತಿಂಗಳುಗಳಲ್ಲೇ ತಿಂಗಳೊಂದರಲ್ಲಿ ದಾಖಲಾದ ಉದ್ಯೋಗಿಗಳ ಅತ್ಯಧಿಕ ಸೇರ್ಪಡೆಯಾಗಿದೆ. ಗುರುವಾರ ಬಿಡುಗಡೆಯಾದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ತಾತ್ಕಾಲಿಕ ದತ್ತಾಂಶಗಳು ಇದನ್ನು ಹೇಳಿವೆ.

ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ 31.29% ಏರಿಕೆ

ಹಿಂದಿನ ತಿಂಗಳು ಅಂದರೆ ಮಾರ್ಚ್ 2024ಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇ. 31.29ರಷ್ಟು ಬೆಳವಣಿಗೆ ದಾಖಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಏಪ್ರಿಲ್ 2023ಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇ. 10ರಷ್ಟು ಬೆಳವಣಿಗೆ ಕಂಡುಬಂದಿದೆ.

ಸದಸ್ಯರ ಸೇರ್ಪಡೆಯ ಈ ಬೆಳವಣಿಗೆಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಹೆಚ್ಚಿದ ಉದ್ಯೋಗಾವಕಾಶಗಳು, ಉದ್ಯೋಗಿ ಪ್ರಯೋಜನಗಳ ಬಗ್ಗೆ ಹೆಚ್ಚಿದ ಅರಿವು ಮತ್ತು ಇಪಿಎಫ್‌ಒದ ಕಾರ್ಯಕ್ರಮಗಳ ಪ್ರಭಾವ ಪ್ರಮುಖವಾಗಿವೆ.

ಹೊಸ ಸದಸ್ಯರ ಸಂಖ್ಯೆಯಲ್ಲಿ ಭಾರೀ ಏರಿಕೆ

ಇಪಿಎಫ್‌ಒ ಸೇರುತ್ತಿರುವ ಉದ್ಯೋಗಿಗಳ ಸಂಖ್ಯೆ ತಿಂಗಳಿಂದ ತಿಂಗಳಿಗೆ ಏರಿಕೆ ಕಾಣುತ್ತಲೇ ಇದೆ. ಈ ವರ್ಷದ ಏಪ್ರಿಲ್‌ನಲ್ಲಿ 8.87 ಲಕ್ಷ ಹೊಸ ಸದಸ್ಯರು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸೇರಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಹೊಸ ಸದಸ್ಯರಲ್ಲಿ 18 ರಿಂದ 25 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏಪ್ರಿಲ್ 2024ರಲ್ಲಿ ಇಪಿಎಫ್‌ಒಗೆ ಹೊಸದಾಗಿ ಸೇರಿದ ಒಟ್ಟು ಸದಸ್ಯರಲ್ಲಿ ಇವರ ಸಂಖ್ಯೆ ಶೇ. 55.50ರಷ್ಟಿದೆ. ಸಂಘಟಿತ ಉದ್ಯೋಗಕ್ಕೆ ಸೇರುತ್ತಿರುವ ಬಹುಪಾಲು ಸದಸ್ಯರು ಯುವಕರು ಎಂಬುದನ್ನು ಇದು ತೋರಿಸುತ್ತಿದೆ. ಮುಖ್ಯವಾಗಿ ಇವರು ಮೊದಲ ಬಾರಿಗೆ ಉದ್ಯೋಗ ಪಡೆದವರಾಗಿದ್ದಾರೆ.

ವೇತನದಾರರ ದತ್ತಾಂಶದ ಲಿಂಗ-ವಾರು ವಿಶ್ಲೇಷಣೆಯ ಪ್ರಕಾರ 8.87 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.49 ಲಕ್ಷ ಸದಸ್ಯರು ಮಹಿಳೆಯರಾಗಿದ್ದಾರೆ. ಅಲ್ಲದೆ, ಏಪ್ರಿಲ್‌ ತಿಂಗಳಲ್ಲಿ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆ ಸರಿಸುಮಾರು 3.91 ಲಕ್ಷ ಆಗಿತ್ತು. ಇದು ಮಾರ್ಚ್ 2024ರ ಹಿಂದಿನ ತಿಂಗಳಿಗೆ ಹೋಲಿಸಿದರೆ ಸರಿಸುಮಾರು ಶೇ. 35.06ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

14.53 ಲಕ್ಷ ಸದಸ್ಯರು ಇಪಿಎಫ್‌ಒಗೆ ಮರು ಸೇರ್ಪಡೆ

ವೇತನದಾರರ ಅಂಕಿ-ಅಂಶಗಳ ಪ್ರಕಾರ, ಸುಮಾರು 14.53 ಲಕ್ಷ ಸದಸ್ಯರು ಇಪಿಎಫ್‌ಒದಿಂದ ಹೊರ ಹೀಗಿ ನಂತರ ಮತ್ತೆ ಸೇರ್ಪಡೆಯಾಗಿದ್ದಾರೆ. ಮಾರ್ಚ್ 2024ರ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಈ ಅಂಕಿ ಅಂಶವು ಶೇ. 23.15ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More