Please enable javascript.high interest rates on loans: ಸಾಲಕ್ಕೆ ದುಬಾರಿ ಬಡ್ಡಿ ಕಟ್ಟಲು ಕಿರುಕುಳ ನೀಡ್ತಿದ್ದಾರಾ? ನೀವು ಕಾನೂನಿನಡಿ ರಕ್ಷಣೆ ಪಡೆಯಬಹುದು - are lenders harassing you to pay high interest rates you can get protection under law know details here | The Economic Times Kannada

ಸಾಲಕ್ಕೆ ದುಬಾರಿ ಬಡ್ಡಿ ಕಟ್ಟಲು ಕಿರುಕುಳ ನೀಡ್ತಿದ್ದಾರಾ? ನೀವು ಕಾನೂನಿನಡಿ ರಕ್ಷಣೆ ಪಡೆಯಬಹುದು

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 20 Jun 2024, 1:48 pm

High Interest Rates On Loans: ಸಾಲದ ಮೇಲೆ ದುಬಾರಿ ಬಡ್ಡಿ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರೆ, ನೀವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಮಿತಿಮೀರಿದ ಬಡ್ಡಿ ಪಾವತಿಸುವಂತೆ ಕಿರುಕುಳ ನೀಡುವವರಿಗೆ 3 ವರ್ಷದವರೆಗೆ‌ ಜೈಲು ಮತ್ತು 30 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು.

 
Interest Rates High
  • ಸಿಎ ವಿಜಯಲಕ್ಷ್ಮೀ ಬಿ. ವಿ., ಚಾರ್ಟರ್ಡ್ ಅಕೌಟೆಂಟ್
ಯಾವುದೇ ಸಾಲದಾತರು, ಲೇವಾದೇವಿದಾರರು, ಗಿರವಿದಾರರು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ದುಬಾರಿ ಬಡ್ಡಿ ವಿಧಿಸುತ್ತಿದ್ದಾರಾ? ಮಿತಿ ಮೀರಿದ ಬಡ್ಡಿ ವಿಧಿಸಿ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರಾ ಅಥವಾ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರಾ? ಈ ಸಂದರ್ಭದಲ್ಲಿ ನೀವು ಕಾನೂನಿನ ರಕ್ಷಣೆ ಪಡೆಯಬಹುದು. ಯಾವುದೇ ವ್ಯಕ್ತಿಯು ಮಿತಿಮೀರಿದ ಬಡ್ಡಿಯನ್ನು ವಿಧಿಸಿದಲ್ಲಿ ಅಥವಾ ಯಾವುದೇ ಸಾಲದ ವಸೂಲಾತಿಗಾಗಿ ಸಾಲಗಾರನಿಗೆ ಕಿರುಕುಳ ನೀಡಿದರೆ ಮೂರು ವರ್ಷದವರೆಗೂ‌ ಜೈಲು ಶಿಕ್ಷೆ ಮತ್ತು ಮೂವತ್ತು ಸಾವಿರ ರೂಪಾಯಿವರೆಗೆ ದಂಡವನ್ನೂ ವಿಧಿಸಬಹುದು.'

ಕರ್ನಾಟಕದಲ್ಲಿ ಗರಿಷ್ಠ ಎಷ್ಟು ಬಡ್ಡಿ ವಿಧಿಸಲು ಅವಕಾಶವಿದೆ?

ಭದ್ರತೆಯ ಸಾಲಗಳಿಗೆ ಅಂದರೆ ಆಸ್ತಿ ಅಥವಾ ಚಿನ್ನವನ್ನು ಭದ್ರತೆ ಇಟ್ಟು ಪಡೆಯುವ ಸಾಲಕ್ಕೆ ವಾರ್ಷಿಕ ಗರಿಷ್ಠ 14% ಹಾಗೂ ಭದ್ರತಾರಹಿತ ಸಾಲಗಳಿಗೆ ವಾರ್ಷಿಕ ಗರಿಷ್ಠ 16% ಬಡ್ಡಿದರವನ್ನು ರಾಜ್ಯ ಸರ್ಕಾರವು ನಿಗಧಿಪಡಿಸಿದೆ. ಆದರೆ ಕಾಯ್ದೆ / ಅಧಿಸೂಚನೆಯಲ್ಲಿ ಸುಸ್ತಿ ಬಡ್ಡಿಯ ಬಗ್ಗೆ ಯಾವುದೇ ಮಿತಿ ಅಥವಾ ಚೌಕಟ್ಟನ್ನು ನಿಗಧಿಪಡಿಸಿಲ್ಲ. ಈ ಮಿತಿಗಿಂತಲೂ ಹೆಚ್ಚು ಬಡ್ಡಿ ವಿಧಿಸಿದರೆ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ, ಸಂಸ್ಥೆಗಳು ಸರ್ಕಾರ ನಿಗಧಿಪಡಿಸಿರುವ ಬಡ್ಡಿದರದ ಬಗ್ಗೆ ತಾವು ವ್ಯವಹರಿಸುತ್ತಿರುವ ಕಛೇರಿಗಳಲ್ಲಿ ಸೂಚನಾ ಫಲಕಗಳನ್ನು ಮಾಡಿಸಿ, ನಗದು ಕಪಾಟಿನ ಪಕ್ಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ.

ಗರಿಷ್ಠ 28% ವರೆಗೆ ಬಡ್ಡಿ ವಿಧಿಸಿರುವ ಕುರಿತು ದೂರು ಬಂದಿವೆ

ಆದರೆ, ಯಾವುದೇ ಲೇವಾದೇವಿ / ಗಿರವಿ / ಹಣಕಾಸು ಸಂಸ್ಥೆಗಳು ಈ ರೀತಿ ಬಡ್ಡಿ ನಿಗಧಿಪಡಿಸಿರುವ ನಾಮಫಲಕವನ್ನು ಅಂಗಡಿಗಳಲ್ಲಿ ಪ್ರದರ್ಶಿಸಿರುವುದಿಲ್ಲ. ಸರ್ಕಾರವು ಅಧಿಸೂಚನೆಯ ಮೂಲಕ ನಿಗಧಿಪಡಿಸಿರುವ ಬಡ್ಡಿ ವಿಧಿಸದೆ, ಎರಡೆರಡು ರಸೀದಿ ಪುಸ್ತಕಗಳನ್ನು ನಿರ್ವಹಣೆ ಮಾಡಿ, ಗರಿಷ್ಠ 28% ವರೆಗೆ ಬಡ್ಡಿ ವಿಧಿಸಿ, ಸಾರ್ವಜನಿಕರನ್ನು ವಂಚಿಸಿ, ಹಣ ಸುಲಿಗೆ ಮಾಡುತ್ತಿರುವುದಾಗಿ ಹಲವು ದೂರುಗಳು ಸ್ವೀಕೃತವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಉಪನಿಬಂಧಕರುಗಳು‌ ಮತ್ತು ಉಪವಿಭಾಗೀಯ ಸಹಾಯಕ ನಿಬಂಧಕರುಗಳು ಲೇವಾದೇವಿ/ಗಿರವಿ/ಹಣಕಾಸು ಸಂಸ್ಥೆಗಳ ಪರಿವೀಕ್ಷಣೆ ಕೈಗೊಂಡು. ತ್ರೈಮಾಸಿಕವಾಗಿ ಪರಿವೀಕ್ಷಣಾ ವರದಿಗಳನ್ನು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಸೂಚಿಸಿದ್ದಾರೆ.

ಹಣಕಾಸು ಮಾರುಕಟ್ಟೆಯನ್ನು ಸಂಘಟಿತ ಮತ್ತು ಅಸಂಘಟಿತ ವಲಯಗಳಾಗಿ ವರ್ಗೀಕರಿಸಲಾಗಿದೆ. ಸಂಘಟಿತ ವಲಯವು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಇತರೆ ನಿಯಂತ್ರಿತ ಘಟಕಗಳನ್ನು ಒಳಗೊಂಡರೆ, ಅಸಂಘಟಿತ ವಲಯವು ಲೇವಾದೇವಿದಾರರು, ಗಿರವಿದಾರರು, ಚಿಟ್ ಫಂಡ್‌ಗಳು, ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಅನೌಪಚಾರಿಕ ಹಣಕಾಸು ಮಧ್ಯವರ್ತಿಗಳನ್ನು ಒಳಗೊಂಡಿರುತ್ತದೆ. ಸಂಘಟಿತ ವಲಯ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅವುಗಳು ನೀಡುವ ಸಾಲದಿಂದ ಹಿಡಿದು ಠೇವಣಿ- ಹೂಡಿಕೆಗಳವರೆಗೂ ಸಂಪೂರ್ಣ ಪರಿವೀಕ್ಷಣೆ ಭಾರತೀಯ ರಿಸರ್ವ್‌ ಬ್ಯಾಂಕ್ ಸುರ್ಪದಿಗೆ ಬರುತ್ತದೆ, ಆದರೆ ಅಸಂಘಟಿತ ವಲಯವನ್ನು ಪರಿವೀಕ್ಷಿಸಲು ರಿಸರ್ವ್‌ ಬ್ಯಾಂಕ್ ನಂತಹ ನಿಯಂತ್ರಕ ಸಂಸ್ಥೆ ಇರುವುದಿಲ್ಲ.

ಭಾರತದಲ್ಲಿ ಸುಮಾರು ಅರ್ಧದಷ್ಟು ಆರ್ಥಿಕ ಚಟುವಟಿಕೆಗಳು ಅಸಂಘಟಿತ ವಲಯಗಳಲ್ಲಿ ನಡೆಯುತ್ತಿದೆ, ಇದರಿಂದ ಹಲವಾರು ರೀತಿಯ ಆರ್ಥಿಕ ವಂಚನೆಗಳು ನಡೆಯುತ್ತಿವೆ, ಇದನ್ನು ತಡೆಯಲು ಕೆಲವು ಕಾನೂನುಗಳನ್ನು ರೂಪಿಸಲಾಗಿದ್ದು, ಅದರಲ್ಲಿ ಕರ್ನಾಟಕ ಮಿತಿಮೀರಿದ ಬಡ್ಡಿದರ ವಿಧಿಸುವಿಕೆಯ ನಿಷೇಧ ಕಾಯ್ದೆ, 2003 ಮತ್ತು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961ರ ಪ್ರಕರಣ 28ರ ರೀತ್ಯ ಲೇವಾದೇವಿದಾರರು, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ವಿಧಿಸಬಹುದಾದ ಗರಿಷ್ಡ ಬಡ್ಡಿಯನ್ನು ಕಾಲಕಾಲಕ್ಕೆ ನಿಗಧಿಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವನ್ನು ನೀಡಿದೆ.

Personal Finance ಮತ್ತು ಆದಾಯ ತೆರಿಗೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ಅಪ್‌ಡೇಟ್‌ ಕುರಿತು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ತಿಳಿಯಿರಿ
ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More